ಇಬ್ನ್ ಸೌದ್
	1880-1953, ಸೌದಿ ಅರೇಬಿಯದ ದೊರೆ. ಪೂರ್ತಿ ಹೆಸರು: ಅಬ್ದುಲ್ ಅಜೀಜ್ ಇಬ್ನ್‍ಸೌದ್. ಇಸ್ಲಾಂ ಧರ್ಮದ ವೀರನಿಯಮ ಪಂಥದವರಾದ ವಹಾಬಿಗಳ ಅಧಿಕಾರವನ್ನು ಅರೇಬಿಯದಲ್ಲಿ ಸ್ಥಾಪಿಸಿದ, ನೆಜ್ದ್ ದೇಶದ ರಿಯಾದ್ ಎಂಬಲ್ಲಿ ಜನಿಸಿದ. ತಂದೆಯಾದ ಅಬ್ದುಲ್ ರಹಮಾನ್ ಮತ್ತು ಬಂಧುಗಳೊಡನೆ ದೇಶಭ್ರಷ್ಠನಾಗಿ ಕುವಾಯಿತ್ ಮತ್ತು ಅರೇಬಿಯದ ಮರುಭೂಮಿಯಲ್ಲಿ ಜೀವನದ ಪೂರ್ವಕಾಲವನ್ನು ಕಳೆಯಬೇಕಾಯಿತು. 1902ರ ಜನವರಿಯಲ್ಲಿ ತನ್ನ ಪೂರ್ವಿಕರ ರಾಜಧಾನಿಯಾಗಿದ್ದ ರಿಯಾದಿನ ಮೇಲೆ ಥಟ್ಟನೆ ಎರಗಿ ಕೆಚ್ಚಿನಿಂದ ಕಾದಿ ಅದನ್ನು ಹಿಡಿದುಕೊಂಡ. ಅಲ್ಲಿನ ನೆಲಸುಗಾರರೊಂದಿಗೂ ವಿರೋಧಿ ಮನೆತನದವರೊಂದಿಗೂ ತುರ್ಕಿಯ ಸೇನೆಗಳೊಂದಿಗೂ ವರ್ಷಾಂತರ ಕಾಲ ಕಾದಾಟ ನಡೆಸಬೇಕಾಯಿತು. 1907ರ ವೇಳೆಗೆ ನೆಜ್ದ್‍ನಲ್ಲಿ ನೆಲೆಸಿ ಆಟೊಮನ್ ಪ್ರಭುವೆಂಬ ಬಿರುದು ಪಡೆದು, ಬ್ರಿಟಿಷರ ಬೆಂಬಲಕ್ಕೆ ಮಾರ್ಗ ಮಾಡಿಕೊಂಡ. ಇಖ್ವಾನ್ ಅಥವಾ ಸೋದರರೆಂದು ಕರೆಸಿಕೊಳ್ಳುತ್ತಿದ್ದ ಮಹಾಬಿಜನ ತಮ್ಮ ಹೋರಾಟದ ಜೀವನವನ್ನು ತ್ಯಜಿಸಿ ಶಾಂತಿ ನೆಮ್ಮದಿಗಳಿಂದ ವ್ಯವಸಾಯ ನಿರತರಾಗುವಂತೆ ಅವರನ್ನು ನೆಲೆಗೊಳಿಸುವುದು ಇಬ್ನ್‍ಸೌದ್ ದೊರೆಯ ಮುಂದಿನ ಹೊಣೆಯಾಯಿತು. ಈ ಜನರ ನಿಷ್ಠೆ ಬೆಂಬಲಗಳಿಂದ ಈತನ ಅಡಳಿತ ಅರೇಬಿಯದಲ್ಲಿ ಭದ್ರವಾಯಿತು. 1913ರಲ್ಲಿ ಅರೇಬಿಯದ ಈಶಾನ್ಯ ಕರಾವಳಿ ಪ್ರಾಂತ್ಯವಾದ ಹೌಸಾ ಎಂಬುದನ್ನು ತುರ್ಕಿಗಳಿಂದ ಕಿತ್ತುಕೊಂಡ. ಪ್ರಥಮ ಮಹಾಯುದ್ಧದ ಕಾಲದಲ್ಲಿ ಬ್ರಿಟಿಷರು ಈತನನ್ನು ನೆಜ್ದ್ ಮತ್ತು ಎಲ್ ಹೌಸ್ ಪ್ರದೇಶಗಳ ದೊರೆಯೆಂದು ಅಂಗೀಕರಿಸಿದರು. ಅದಕ್ಕೆ ಪ್ರತಿಯಾಗಿ ಕುವಾಯಿತ್, ಬಹ್ರೇನ್, ಕಾಟಾರ್ ಮತ್ತು ಒಮಾನ್ ಕರಾವಳಿಯ ಮೇಲೆ ತಾನು ಅಕ್ರಮಣ ನಡೆಸುವುದಿಲ್ಲವೆಂದೂ ಆ ಪ್ರದೇಶದ ವ್ಯವಹಾರಗಳಲ್ಲಿ ಪ್ರವೇಶಿಸುವುದಿಲ್ಲವೆಂದೂ ಈ ದೊರೆ ಪ್ರತಿಜ್ಞೆ ಮಾಡಿದ. ಯುದ್ಧಾನಂತರದಲ್ಲಿ ಇವನ ರಾಜ್ಯ ಇನ್ನೂ ವಿಸ್ತಾರವಾಯಿತು. ಅರಬ್ಬೀ ರಾಜ್ಯಗಳಿಗೆಲ್ಲ ತಾನೇ ದೊರೆಯೆಂದು ಮೆರೆಯುತ್ತಿದ್ದ ಹುಸೇನನನ್ನೂ ಅವನ ಸಂಗಡಿಗರನ್ನೂ ಈತ ಹೊಡೆದೋಡಿಸಿ 1926ರಲ್ಲಿ ಹೆಜಾಜ್ ದೇಶಕ್ಕೂ ಅಧಿಪತಿಯಾದ.

	1952ರ ಅನಂತರ ಹೆಜಾಜ್ ಮತ್ತು ನೆಜ್ದ್ ದೇಶಗಳ ಒಕ್ಕೂಟ ಸಾಧ್ಯವಾಯಿತು. ಇದೇ ಸೌದಿ ಅರೇಬಿಯ. ಸೌದಿ ಅರೇಬಿಯದ ದೊರೆಯೆನಿಸಿಕೊಂಡ ಇಬ್ನ್ ಸೌದ್ ಮುಂದೆ ಸ್ವಲ್ಪ ಕಾಲ ಅಡಳಿತದಲ್ಲಿ ಕಷ್ಟಗಳನ್ನೆದುರಿಸಬೇಕಾಯಿತು. ಬಂಡಾಯವೇಳುತ್ತಿದ್ದ ಮಹಾಬಿಗಳನ್ನಡಗಿಸುವುದು ಸ್ವಲ್ಪ ಪ್ರಯಾಸಕರವಾಯಿತು. ಇಬ್ನ್ ಸೌದನ ರಾಜ್ಯವಿಸ್ತರಣದಿಂದ ಉತ್ತರದಲ್ಲಿ ಬ್ರಿಟಿಷ್ ಮೇಲ್ವಿಚಾರಣೆಗೊಳಪಟ್ಟ ಪ್ರದೇಶಗಳೊಡನೆ ಎಲ್ಲೆಕಟ್ಟಿನ ಸಂಬಂಧವಾಗಿ ವಿರಸವೇರ್ಪಡುವ ಸಂಭವವಿತ್ತು. ಇಬ್ನ್‍ಸೌಧ್ ಸಂಧಾನದ ಮಾರ್ಗದಿಂದ ಅದನ್ನು ಪರಿಹರಿಸಿಕೊಂಡದ್ದರಿಂದ ಮುಂದೆ ಈತನ ಆಡಳಿತ ಸುಗಮವಾಯಿತು. 1936ರಲ್ಲಿ ಇರಾಕ್ ಈಜಿಪ್ಟುಗಳೊಡನೆಯೂ ಒಪ್ಪಂದ ಮಾಡಿಕೊಂಡಿದ್ದರಿಂದ ದೇಶದಲ್ಲಿ ನೆಮ್ಮದಿ ನೆಲೆಸಿತು. ಮುಂದೆ ಇಬ್ನ್‍ಸೌದ್ ತನ್ನ ದೇಶದ ಅಭಿವೃದ್ಧಿಯ ಕಡೆಗೆ ಗಮನ ಹರಿಸಿದ. ಪರ್ಷಿಯ ಖಾರಿ ಹಾಗೂ ಕೆಂಪು ಕಡಲುಗಳ ತೀರಪ್ರದೇಶದಲ್ಲಿನ ತೈಲಸಂಪತ್ತಿನ ಪ್ರಯೋಜನ ಪಡೆಯುವುದು ಸಾಧ್ಯವಾಯಿತು. ವಿದೇಶಿ ತೈಲ ಸಂಸ್ಥೆಗಳೊಂದಿಗೆ ಕರಾರು ಏರ್ಪಟ್ಟಿತು. ದೊರೆಯ ಬೊಕ್ಕಸಕ್ಕೆ ಹಣ ಹರಿದು ಬಂತು.

	1940ರಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನಕ್ಕೂ ಅರೇಬಿಯಕ್ಕೂ ನಡುವೆ ರಾಜತಾಂತ್ರಿಕ ಸಂಬಂಧವೇರ್ಪಟ್ಟಿತು. ದ್ವಿತೀಯ ಮಹಾಯುದ್ದ ಕಾಲದಲ್ಲಿ ಈತ ಆಂಗ್ಲೋ-ಸೌದಿ ಒಪ್ಪಂದದ ಷರತ್ತುಗಳಿಗೆ ಬದ್ಧನಾಗಿ ತಾಟಸ್ಥ್ಯ ನೀತಿಯನ್ನು ಕಟ್ಟು ನಿಟ್ಟಾಗಿ ಅನುಸರಿಸಿದ್ದರಿಂದ ಯುದ್ಧದ ಬಿಸಿ ಈ ರಾಜ್ಯಕ್ಕೆ ಸ್ವಲ್ಪವೂ ತಟ್ಟಲಿಲ್ಲ. 1947ರಿಂದ ಈತ ಅರಬ್ಬೀ ಒಕ್ಕೂಟದ ಸದಸ್ಯನಾಗಿದ್ದ. ಪ್ರತ್ಯೇಕ ಇಸ್ರೇಲ್ ರಾಜ್ಯ ಸ್ಥಾಪನೆಯನ್ನು ವಿರೋಧಿಸಿದವರಲ್ಲಿ ಈ ದೊರೆಯೂ ಒಬ್ಬ. ಅರಬ್ಬೀ ದೇಶಗಳ ಸ್ವಾತಂತ್ರ್ಯವನ್ನೂ ಒಗ್ಗಟ್ಟನ್ನೂ ಸ್ವಾಗತಿಸಿದ್ದಾಗ್ಯೂ ಅರಬ್ಬೀ ಒಕ್ಕೂಟವನ್ನು ಈತ ಕಾರ್ಯತಃ ವಿರೋಧಿಸುತ್ತಿದ್ದ.

ಅರೇಬಿಯ ದೇಶಕ್ಕೆ ಸ್ಥಿರವಾದ ಸರ್ಕಾರ ತಂದುಕೊಟ್ಟು ಅರಬರ ರಾಷ್ಟ್ರೀಯತೆಗೆ ಇಂಬುಗೊಟ್ಟ ಇಬ್ನ್‍ಸೌದ್ ಇಸ್ಲಾಂ ಧರ್ಮಪ್ರಿಯ ತನ್ನ ದೇಶದ ಜನ ಪಾಶ್ಚಾತ್ಯ ಸಂಸ್ಕøತಿಯ ಅಂಧಾನುಕರಣೆ ಮಾಡದಂತೆ ತಡೆಯಲು ಈತ ಯತ್ನಿಸಿದ.	

(ಎಂ.ಎಸ್.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ